ವಾರದ ಪರಿಚಯ
ಒಂದು ವಾರಕ್ಕೆ ಏಳು ದಿನಗಳು. ಈ ಏಳು ದಿನಗಳಿಗೆ ಗ್ರಹಗಳ ಹೆಸರನ್ನು ಇಡಲಾಗಿದೆ. ಈ ರೀತಿ ಹೆಸರಿಡುವುದು
ಗ್ರೀಕ್ ಸಂಸ್ಕೃತಿಯಿಂದ ಬಂದಿದೆ. 3 ರಿಂದ 5 ನೇ ಶತಮಾನದ ಸುಮಾರಿಗೆ ಈ ಹೆಸರುಗಳ ಬಳಕೆ ಭಾರತದಲ್ಲಿ ಶುರು ಆಗಿರಬೇಕು ಅನ್ನುವದು ಇತಿಹಾಸಕಾರರ ಅಭಿಮತ.
ವಾರದ ಏಳು ದಿನಗಳ ಹೆಸರು ಹೀಗಿವೆ. ಮೊದಲು ಗ್ರಹದ ಹೆಸರು ಹಾಗೂ ವಾರ ಎಂಬ ಪದ ಸೇರಿಸಿ ದಿನಗಳಿಗೆ ಕರೆಯುವದು ರೂಢಿ.
- ಭಾನುವಾರ / ರವಿವಾರ / ಆದಿತ್ಯವಾರ
- ಸೋಮವಾರ
- ಮಂಗಳವಾರ
- ಬುಧವಾರ
- ಗುರುವಾರ
- ಶುಕ್ರವಾರ
- ಶನಿವಾರ
ಭಾನುವಾರ
ವಾರದ ಮೊದಲ ದಿನ ಭಾನುವಾರ. ಇದನ್ನು ರವಿವಾರ ಅಥವಾ ಆದಿತ್ಯವಾರ ಎಂದೂ ಕೂಡ ಕರೆಯುತ್ತಾರೆ. ಭಾನು / ರವಿ / ಆದಿತ್ಯ ಎಂದರೆ ಸೂರ್ಯ ಎಂದರ್ಥ. ಇದು ಜ್ಯೋತಿಶಾಸ್ತ್ರದ ಪ್ರಕಾರ ನವಗ್ರಹಗಳಲ್ಲೊಂದು. ವಾಸ್ತವಿಕವಾಗಿ ಸೂರ್ಯ ನಕ್ಷತ್ರವಾದರೂ ಪ್ರಾಚೀನರು ಅದನ್ನು ಗ್ರಹ ಎಂದೇ ಪರಿಗಣಿಸಿದ್ದರು.
ಸೋಮವಾರ
ಸೋಮ ಎಂದರೆ ಚಂದ್ರನ ಇನ್ನೊಂದು ಹೆಸರು. ಚಂದ್ರ ಕೂಡ ಪ್ರಾಚೀನರ ನಂಬಿಕೆಯ ಪ್ರಕಾರ ನವಗ್ರಹಗಳಲ್ಲಿ ಒಂದು. ವಾಸ್ತವಿಕವಾಗಿ ಅದು ಭೂಮಿಯ ಉಪಗ್ರಹ ಆಗಿದೆ.
ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ
ಮಂಗಳ, ಬುಧ, ಗುರು, ಶುಕ್ರ ಹಾಗೂ ಶನಿ ಗ್ರಹಗಳ ಹೆಸರನ್ನು ಉಳಿದ ವಾರಗಳಿಗೆ ಇಡಲಾಗಿದೆ.
ಆಡು ಭಾಷೆಯಲ್ಲಿ ಜನ ವಾರಗಳ ಹೆಸರನ್ನು ಬಾನ್ವಾರ, ಸೋಮ್ವಾರ, ಮಂಗ್ಳವಾರ, ಬುದ್ವಾರ, ಗುರ್ವಾರ, ಶುಕ್ರ್ವಾರ, ಶನ್ವಾರ ಎಂದು ಉಚ್ಚರಿಸುತ್ತಾರೆ.
ವಾರದ ದಿನ | ಕನ್ನಡ | ಇಂಗ್ಲೀಶ್ | ಆಡು ಭಾಷೆ |
---|---|---|---|
1 | ಭಾನುವಾರ / ರವಿವಾರ | ಸಂಡೇ | ಬಾನ್ವಾರ |
2 | ಸೋಮವಾರ | ಮಂಡೇ | ಸೋಮ್ವಾರ |
3 | ಮಂಗಳವಾರ | ಟ್ಯೂಸಡೆ | ಮಂಗ್ಳವಾರ |
4 | ಬುಧವಾರ | ವೆನ್ಸಡೆ | ಬುದ್ವಾರ |
5 | ಗುರುವಾರ | ಥರ್ಸಡೆ | ಗುರ್ವಾರ |
6 | ಶುಕ್ರವಾರ | ಫ್ರೈಡೆ | ಶುಕ್ರ್ವಾರ |
7 | ಶನಿವಾರ | ಸೆಟರಡೆ | ಶನ್ವಾರ |
ವಾರದ ದಿನಗಳನ್ನು ಕೆಲಸದ ದಿನಗಳು ಹಾಗೂ ರಜಾದಿನಗಳು ಎಂದು ವಿಂಗಡಿಸಬಹುದು. ಹೆಚ್ಚಿನ ದೇಶಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಕೆಲಸದ ದಿನ (ವರ್ಕಿಂಗ್ ಡೇ) ಆಗಿದೆ.ಉಳಿದ ಶನಿವಾರ ಹಾಗೂ ರವಿವಾರ ರಜಾದಿನಗಳು. ಕೆಲವು ಕಡೆ ಭಾನುವಾರದಿಂದ ಗುರುವಾರದ ವರೆಗೆ ಕೆಲಸದ ದಿನ. ಶುಕ್ರವಾರ ಹಾಗು ಶನಿವಾರ ರಜಾದಿನ. ಈ ರಜಾದಿನವನ್ನು ವಾರಾಂತ್ಯ ಅಥವಾ ವೀಕೆಂಡ್ ಅಥವಾ ವಾರದ ಕೊನೆ ಎಂದು ಕರೆಯುತ್ತಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ ತಿಳಿಸಿ.